Contacts

92 Bowery St., NY 10013

thepascal@mail.com

+1 800 123 456 789

ಅವಿರತ ಉಚಿತ ನೋಟ್ ಪುಸ್ತಕ ವಿತರಣೆ: ಒಂದು ಅಳಿಲು ಸೇವೆಯ ಸುತ್ತಾ…

ನಗರಗಳಲ್ಲಿ ವೆಚ್ಚ ಭರಿಸಲಾಗದೆ ಶಿಕ್ಷಣ ಹೊರೆಯಾಗುತ್ತಿದ್ದರೆ, ದೂರದ ಹಳ್ಳಿಗಳಲ್ಲಿ ಬಡತನ, ಮೂಲಭೂತ ಸೌಕರ್ಯಗಳ ಕೊರತೆಯಿಂದ ಶಿಕ್ಷಣ, ಶಾಲೆಗಳು ಮರೆಯಾಗುತ್ತಿವೆ. ‘ಪ್ರಾಥಮಿಕ ಶಿಕ್ಷಣ, ಮಕ್ಕಳ ಮೂಲಭೂತ ಹಕ್ಕು’ ಎಂಬ ಕಾನೂನು ರಚಿಸಿರುವ ಭಾರತ ಸರ್ಕಾರ, ಶಿಕ್ಷಣವನ್ನು ಸರ್ವವ್ಯಾಪಿಗೊಳಿಸಲು ಹಾಗೂ ಸಾಕ್ಷರತೆಯನ್ನು ಸಾಧಿಸಲು, ಮಕ್ಕಳನ್ನು ಶಾಲೆಗೆ ಮರಳಿ ಕರೆ ತರಲು ‘ಸರ್ವ ಶಿಕ್ಷಣ ಅಭಿಯಾನ’, ‘ಮಧ್ಯಾಹ್ನದ ಬಿಸಿಯೂಟ’, ‘ಅಂಗನವಾಡಿ’, ‘ಸೈಕಲ್ ವಿತರಣೆ’ ಹೀಗೆ ಹತ್ತು ಹಲವು ಯೋಜನೆಗಳನ್ನೂ ಹಮ್ಮಿಕೊಂಡಿವೆ. ಈ ಎಲ್ಲಾ ಕಾರ್ಯಕ್ರಮ ಹಾಗೂ ಯೋಜನೆಗಳ ಹೊರತಾಗಿಯೂ, ಗ್ರಾಮೀಣ ಶಿಕ್ಷಣ ವ್ಯವಸ್ಥೆಯು ಉತ್ತಮ ಶಿಕ್ಷಕರ ಕೊರತೆ, ಪೀಠೋಪಕರಣದ ಕೊರತೆ, ಅನಾನುಕೂಲಕರವಾದ ಕಟ್ಟಡ, ತರಗತಿಗಳು, ತಂತ್ರಜ್ಞಾನದ ಕೊರತೆ, ಶೌಚಾಲಯದ ಕೊರತೆ ಹೀಗೆ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿವೆ ಮತ್ತು ಇವೇ ಸವಾಲುಗಳು ಹಲವಾರು ಮಕ್ಕಳನ್ನು ಶಾಲೆಯಿಂದ, ಶಿಕ್ಷಣದಿಂದ ದೂರಮಾಡಿದೆ. ಈ ಎಲ್ಲಾ ಸವಾಲು/ಕೊರತೆಗಳ ಕಾರಣದಿಂದ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗದಂತೆ ಮಾಡುವಲ್ಲಿ ಸರ್ಕಾರಕ್ಕಿರುವಷ್ಟೇ ಜವಾಬ್ದಾರಿ ಸರ್ಕಾರೇತರ ಸಂಸ್ಥೆಗಳಿಗೂ ಇದೆ.
ಈ ದಿಕ್ಕಿನಲ್ಲಿ, ಗ್ರಾಮೀಣ ಶಿಕ್ಷಣ ಅಭಿವೃದ್ದಿಯನ್ನು ತನ್ನ ಕಾರ್ಯಕ್ಷೇತ್ರದ ಪ್ರಮುಖ ಅಂಶವನ್ನಾಗಿಸಿಕೊಂಡಿರುವ ‘ಅವಿರತ ಪ್ರತಿಷ್ಠಾನ ‘ ಎಂಬ ಸರ್ಕಾರೇತರ ಸಂಸ್ಥೆ, ಸೊರಗುತ್ತಿರುವ ಗ್ರಾಮೀಣ ಶಿಕ್ಷಣ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಅಭ್ಯಸಿಸಿ, ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊಸ ಆಯಾಮವನ್ನೇ ಸೃಷ್ಟಿಸುವ ಪ್ರಯತ್ನದಲ್ಲಿದೆ.ಕನ್ನಡ ನಾಡು, ನುಡಿ, ಸಂಸ್ಕೃತಿ ಯನ್ನು ಎತ್ತಿ ಹಿಡಿಯುತ್ತಾ, ಕನ್ನಡಿಗರ ಪರಿಸರವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಮೌಲ್ಯಯುತ ಸಮಾಜವನ್ನು ಕಟ್ಟುವ ಕೆಲಸದಲ್ಲಿ ನಿರತವಾಗಿರುವ ಉತ್ಸಾಹದ ಯುವಪಡೆಯೇ ಅವಿರತ ಪ್ರತಿಷ್ಠಾನ. ೨೦೦೭ರ ಮಾರ್ಚ್ ನಲ್ಲಿ ಆರಂಭವಾದ ಅವಿರತ ಪ್ರತಿಷ್ಠಾನವು ಶಿಕ್ಷಣ, ತರಬೇತಿ, ಆರೋಗ್ಯ, ಕಲೆ-ಸಾಹಿತ್ಯ, ಮಹತ್ವ ವಿಷಯಗಳ ಚಿಂತನೆ, ವಿಚಾರ ಗೋಷ್ಠಿ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿಗಾಗಿ ನಿರಂತರ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ನಾಡಿನ ಸಮತೋಲನ ಅಭಿವೃದ್ದಿಗಾಗಿ ಮೌಲ್ಯಯುತ ಮತ್ತು ತರ್ಕಬದ್ದ ಸಂಘಟನೆಯಾಗಿ ಶ್ರಮಿಸುತ್ತಿರುವ ಅವಿರತ ಪ್ರತಿಷ್ಠಾನವು, ವೈದ್ಯರು, ಸಾಫ್ಟ್ ವೇರ್ ತಂತ್ರಜ್ಣರು, ಶಿಕ್ಷಕರು, ವಕೀಲರು, ಪತ್ರಕರ್ತರು, ಕಲಾವಿದರು, ಸಾಹಿತಿಗಳನ್ನೊಳಗೊಂಡಿದ್ದು, ಹಲವಾರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.
‘ಹಣತೆಯ ಅಡಿಯಲ್ಲೇ, ಕತ್ತಲೆಯ ತವರು’ ಎನ್ನುವ ಕವಿವಾಣಿಯಂತೆ, ಮಹಾನಗರದ ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲೇ ಬರುವ, ಇಲ್ಲೇ ಮೂಲೆಯಲ್ಲಿರುವ ಹಳ್ಳಿಯದು. ಕೆಲವು ವರ್ಷಗಳ ಹಿಂದೆ, ಕುತೂಹಲಕ್ಕಾಗಿಯೋ ಅಥವಾ ದಾರಿ ತಪ್ಪಿಯೋ ಅವಿರತದ ಕೆಲವು ಸದಸ್ಯರು ಈ ಹಳ್ಳಿಗೆ ಅಚಾನಕ್ಕಾಗಿ ಭೇಟಿ ನೀಡಿವಂತಾಯಿತು. ಅಲ್ಲಿ ಕಾಣಿಸಿಕೊಂಡ ದೃಶ್ಯಗಳು, ತಿಳಿದುಕೊಂಡ ವಿಷಯಗಳು, ಹುಟ್ಟಿಕೊಂಡ ಯೋಚನೆಗಳು ಮುಂದೆ ದೊಡ್ಡ ಯೋಜನೆಯಾಗಿ, ಅವಿರತ ತಂಡದ ವಾರ್ಷಿಕ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತದೆಯೆಂದು ಅವರಿಗಿನ್ನೂ ತಿಳಿದಿರಲಿಲ್ಲ.

ಕುಗ್ರಾಮವಲ್ಲದೇ ಇದ್ದರೂ, ಆರ್ಥಿಕವಾಗಿ ಬೆಳೆದಿಲ್ಲದ ಹಳ್ಳಿಯದು. ದಿನಗೂಲಿಯನ್ನು ನಂಬಿರುವ ಜನರಿರಬೇಕು; ಸುತ್ತಲೂ ಗುಡಿಸಲಿನ ಮನೆಗಳು, ನಡುವೆಯೊಂದು ಚೆಂದದ ಕಾಂಕ್ರೀಟ್ ಕಟ್ಟದ ಸರ್ಕಾರಿ ಶಾಲೆ. ಶಾಲೆಗೆ ಹೋಗುವ ಮಕ್ಕಳಿಗೆ ಓದುವ ಉತ್ಸಾಹವಿದ್ದರೂ, ಊಟ, ಬಟ್ಟೆ, ಪುಸ್ತಕ ಸಿಕ್ಕರೂ ಸರಿಯಾದ ಪ್ರೋತ್ಸಾಹವಿಲ್ಲದೆ ಅವರ ಶಿಕ್ಷಣಾಭ್ಯಾಸ ಸಮರ್ಪಕವಾಗಿರಲಿಲ್ಲ. ಶಾಲೆಯ ಉಪಾಧ್ಯಾಯರೊಂದಿಗೆ ಚರ್ಚಿಸಿ, ಮಕ್ಕಳೊಂದಿಗೆ ಬೆರೆತು, ಅಲ್ಲಿನ ಅವಶ್ಯಕತೆಯನ್ನು ಅರಿತ ತಂಡದ ಸದಸ್ಯರು ಮಕ್ಕಳಿಗೆ ಓದಿನ ಮಹತ್ವ ತಿಳಿಸಿ, ಎಲ್ಲಾ ಮಕ್ಕಳಿಗೆ ಸ್ಪೋರ್ಟ್ಸ್ ಕಿಟ್ ಅನ್ನು ಕೊಟ್ಟು ಓದಲು ಹುರಿದುಂಬಿಸಿ ಬಂದರು.
ಹಿಂದುರಿಗಿ ಬಂದವರು, ತಾವು ಮಾಡಿದ ಸಹಾಯವನ್ನು ಕೊಂಡಾಡಿಕೊಂಡು, ಆ ಹಳ್ಳಿಯ, ಶಾಲೆಯ ಸ್ಥಿತಿಯನ್ನು ನೆನೆದು ಮರುಗಿ ಸುಮ್ಮನಾಗಲಿಲ್ಲ. ಮಹಾನಗರದ ಸುತ್ತಮುತ್ತ ಅಂಥದ್ದೇ ಸ್ಥಿತಿಯಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಗುರುತಿಸಿದರು. ಶಾಲಾ ಮುಖ್ಯಸ್ಥರೊಂದಿಗೆ ಚರ್ಚಿಸಿ ಅಲ್ಲಿನ ಅವಶ್ಯಕತೆಗಳನ್ನು, ಅಸಹಾಯಕತೆಯನ್ನು ತಿಳಿದುಕೊಂಡರು; ತಮ್ಮ ತಂಡದ ಸದಸ್ಯರ, ಅವರ ಸ್ನೇಹಿತರ, ಸಂಬಂಧಿಗಳ ತನು, ಮನ, ಧನ ಸಹಾಯದೊಂದಿಗೆ ಈ ಎಲ್ಲಾ ಶಾಲೆಗಳ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ಶೈಕ್ಷಣಿಕ ವರ್ಷಕ್ಕಾಗುವಷ್ಟು ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸುವ ಯೋಜನೆ ರೂಪಿಸಿದರು.
ಹೀಗೆ, ಶಾಲೆಯೊಂದರ ಮಕ್ಕಳನ್ನು ಪ್ರೋತ್ಸಾಹಿಸುವ ಸಲುವಾಗಿ ಶುರುವಾದ ಸಣ್ಣ ಕೆಲಸ, ಇಂದು ದೊಡ್ಡ ಯೋಜನೆಯಾಗಿ ನೂರಾರು ಶಾಲೆಗಳನ್ನು ತಲುಪಿದೆ. ಹಲವಾರು ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಶಾಲೆಗೆ ಸೇರುವ ಮಕ್ಕಳ ಹಾಜರಾತಿಯನ್ನು ಹೆಚ್ಚಿಸಿರುವ ಹೆಮ್ಮೆಯೂ ಈ ಯೋಜನೆಗೆ ಉಂಟು. ಅಲ್ಲದೇ, ಅವಿರತ ತಂಡವೂ ಸಹ ತನ್ನ ನಿರಂತರ ಸಕ್ರಿಯತೆಯಿಂದ ಈ ಯೋಜನೆಯ ವ್ಯಾಪ್ತಿಯನ್ನು ದೂರದ ಗಡಿ ಪ್ರದೇಶದ ಹಳ್ಳಿಗಳವರೆಗೂ, ಮಲೆನಾಡಿಗೂ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ವರೆಗೂ ವಿಸ್ತರಿಸಿಕೊಂಡಿದೆ.

ಪ್ರತಿ ತರಗತಿಯ ವಿದ್ಯಾರ್ಥಿಗೂ ಒಂದು ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ನೋಟ್ ಪುಸ್ತಕಗಳೆಷ್ಟು?! ಎಂಬುದನ್ನು ವೈ ಜ್ಞಾನಿಕವಾಗಿ ಅಭ್ಯಸಿಸಿ, ಅವುಗಳನ್ನು ಆಕರ್ಷಣೀಯವಾಗಿ ಮುದ್ರಿಸಿ, ಶೈಕ್ಷಣಿಕ ವರ್ಷ ಪ್ರಾರಂಭವಾಗುವ ವೇಳೆಗೆ (ಪ್ರತಿ ವರ್ಷದ ಜೂನ್ ತಿಂಗಳಿನಲ್ಲಿ) ವಿದ್ಯಾರ್ಥಿಗಳಿಗೆ ನೇರವಾಗಿ ತಲುಪಿಸುವವರೆಗಿನ ಸಂಪೂರ್ಣ ಜವಾಬ್ದಾರಿಯನ್ನು ಅವಿರತ ತನ್ನದಾಗಿಸಿಕೊಳ್ಳುವುದೇ ಈ ಯೋಜನೆಯ ವಿಶಿಷ್ಟತೆ ಹಾಗೂ ಯಶಸ್ವಿಗೆ ಕಾರಣವಾಗಿದೆ. ಜೊತೆಗೆ, ಹೀಗೆ ಮಾಡುವುದರಿಂದ ದಾನಿಗಳಿಗೆ ಅವಿರತದ ಕೆಲಸಗಳಲ್ಲಿ ಪಾರದರ್ಶಕತೆಯನ್ನು ಒದಗಿಸಿದಂತೆಯೂ ಆಗುತ್ತದೆ

‘ನನ್ನ ಶಾಲೆ – ನನ್ನ ಹೆಮ್ಮೆ’ ಎಂಬ ಚಿಂತನೆಯಡಿಯಲ್ಲಿ ಒಂದು ಶಾಲೆಯ ಉಸ್ತುವಾರಿ ವಹಿಸಿಕೊಂಡ ಸದಸ್ಯರ ಉಪತಂಡವು, ಪುಸ್ತಕ ವಿತರಣೆಗೆ ಬೇಕಾದ ಖರ್ಚು-ವೆಚ್ಚಗಳನ್ನು ಸ್ವತಂತ್ರವಾಗಿ ಕ್ರೋಢೀಕರಿಸಿತ್ತದೆ. ಹೀಗೆ ಮಾಡುವುದರಿಂದ ಒಂದು ಶಾಲೆಯ ಸಂಪೂರ್ಣ ಜವಾಬ್ದಾರಿ ಆ ತಂಡದ್ದಾಗುತ್ತದೆ ಹಾಗೂ ಶಾಲೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡು ಕಾರ್ಯಕ್ರಮ ಪರಿಣಾಮಕಾರಿಯಾಗಿದೆ

ಶಿಕ್ಷಣ, ಕಲೆ, ಸಂಸ್ಕೃತಿ, ಆರೋಗ್ಯ,ಪರಿಸರ ಕ್ಷೇತ್ರಗಳಲ್ಲಿ ನಾಡಿಗಾಗಿ ಏನಾದರೂ ಮಾಡಬೇಕು ಎಂದು ಕನವರಿಸುವ ಜನಕ್ಕೆ, ತುಡಿಯುವ ಮನಕ್ಕೆ ಅವಿರತ ಪ್ರತಿಷ್ಠಾನ ಸೂಕ್ತವಾದ ಸಂಸ್ಥೆ / ತಂಡ.
ಕೇವಲ ಹಣವನ್ನು ಕೊಟ್ಟು, ಕೆಲಸವನ್ನು ಬೇರೊಬ್ಬರಿಗೆ ವಹಿಸಿವುದಕ್ಕೂ ಮೀರಿದ ಆಕರ್ಷಣೆ, ಅರ್ಪಣೆಯನ್ನು ಅವಿರತದ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಕಾಣಬಹುದಾಗಿದೆ. ಕೈಗೊಳ್ಳುವ ಯಾವುದೇ ಕೆಲಸವನ್ನು ಕಾಳಜಿಯಿಂದ ಎದೆಗವುಚಿಕೊಂಡು ಮಾಡುವ ಅವಿರತ, ಸಾಧನೆ ಮಾಡಿರುವವರಿಂದ ಪ್ರೇರಣೆ ಪಡೆದಿರುವ ತಂಡ; ಸಾಧನೆಗೆ ಮಿತಿಯಿಲ್ಲ ಎಂಬುದನ್ನು ಅರಿತಿರುವ ತಂಡ.
ತಾನು ನಂಬಿರುವುದೇ ಸತ್ಯವೆಂದು ತಿಳಿಯದ ಅವಿರತ ಪ್ರತಿಷ್ಠಾನ ತಾನು ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಆಗಾಗ ಪರಿಶೀಲನೆಗೊಳಪಡಿಸಿ, ಹಿರಿಯರ ನಿರ್ದೇಶನವನ್ನು, ಕಿರಿಯರ ಸಲಹೆಗಳನ್ನೂ ಪರಿಗಣಿಸಿ, ಕಾಲ ಕಾಲಕ್ಕೆ ತನ್ನ ಯೋಜನೆಗಳನ್ನು,ಕಾರ್ಯಕ್ರಮಗಳನ್ನು ಪರಿಷ್ಕರಿಸುತ್ತಿರುವುದರಿಂದಲೇ ಅಲ್ಲಿ ಸದಾ ಹೊಸಹುಮ್ಮಸ್ಸು, ಲವಲವಿಕೆ, ಚೈತನ್ಯ ಮೂಡಿರುತ್ತದೆ. ಈ ಶಕ್ತಿ, ಸಾಮರ್ಥ್ಯವು ತಂಡದಲ್ಲಿ ಸದಾ ಜೀವನದಿಯಂತೆ ಹರಿಯುತಿರಲಿ, ಅದರ ಫಲ ನಿರಂತರವಾಗಿ ನಾಡಿಗೆ ದೊರೆಯುವಂತಾಗಲಿ…

Aviratha Note Book Drive 2016

View stream on flickr

Leave a Reply

Your email address will not be published. Required fields are marked *